ಕುಣಿಂದರು

ಹಿಮಾಲಯದ ಸಿವಾಲಿಕ್ ಪರ್ವತ ಪ್ರದೇಶದಲ್ಲಿ ಯಮುನಾ ಸಟ್ಲೆಜ್ ನದಿಗಳ ಮಧ್ಯಪ್ರದೇಶದಲ್ಲಿ ಕ್ರಿಸ್ತಶಕದ ಆರಂಭ ಕಾಲದಲ್ಲಿ ರಾಜ್ಯವಾಳುತ್ತಿದ್ದ ಒಂದು ಪಂಗಡದ ಜನ. ಇಂಡೋ-ಗ್ರೀಕರ ನಾಣ್ಯಗಳನ್ನು ಹೋಲುವ ಇವರ ನಾಣ್ಯಗಳ ಆ ಪ್ರದೇಶದಲ್ಲಿ ದೊರಕಿವೆ. ಅವುಗಳಲ್ಲೊಂದರ ಮೇಲೆ ಮಹಾರಾಜ ಎಂಬ ಬಿರುದಿದ್ದ ಅಮೋಘಭೂತಿಯೆಂಬ ಕುಣಿಂದ ರಾಜನ ಉಲ್ಲೇಖವಿದೆ. ಈ ನಾಣ್ಯಗಳ ಮೇಲೆ ಕೆಲವೊಮ್ಮೆ ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳಲ್ಲೂ ಕೆಲವು ಬಾರಿ ಬ್ರಾಹ್ಮಿಯಲ್ಲಿ ಮಾತ್ರವೂ ಬರಹಗಳಿರುತ್ತಿದ್ದುವು. ಅನಂತರ ಕಾಲದ ಕುಣಿಂದ ನಾಣ್ಯಗಳು ಕುಷಾಣರ ತಾಮ್ರದ ನಾಣ್ಯಗಳನ್ನು ಹೋಲುತ್ತಿದ್ದುವು. ಅವುಗಳ ಮೇಲೆ ಭಾಗವತಃ. ಛತ್ರೇಶ್ವರ ಮಹಾತ್ಮನಃ ಎಂಬ ಲೇಖನಗಳಿರುತ್ತಿದ್ದವು. ಛತ್ರ ಅಥವ ಅಹಿಚ್ಛತ್ರ ಇವರ ರಾಜಧಾನಿಯಾಗಿದ್ದಿರಬಹುದೆಂದು ಕೆಲವು ವಿದ್ವಾಂಸರು ಊಹಿಸಿದ್ದಾರೆ. ಇವರಲ್ಲಿ ಪ್ರಸಿದ್ಧನಾದ ದೊರೆ ಅಮೋಘಭೂತಿ. ಕುಣಿಂದರ ನೆರೆಯವರಾದ ಕುಲೂತರು (ಕುಲುಕಣಿವೆಯ ಆಳರಸ ಪಂಗಡ) ಮೂರನೆಯ ಶತಮಾನದ ಸುಮಾರಿನಲ್ಲಿ ಇವರನ್ನು ಸೋಲಿಸಿ ನಾಶಗೊಳಿಸಿದರೆಂದು ತಿಳಿದು ಬರುತ್ತದೆ. 

 

(ಜಿ.ಆರ್.ಆರ್.; ಕೆ.ಬಿ.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ